SportzGazette

ಕಾಲೇಜುಗಳಲ್ಲಿ, ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯ

ಕಾಲೇಜುಗಳಲ್ಲಿ, ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯದ ಪ್ರಕರಣಗಳನ್ನು ನೋಡುವಾಗ ನನ್ನ ಕಾಲೇಜು ದಿನಗಳು ಥಟ್ಟನೆ ನೆನಪಾಗುತ್ತವೆ. ಈ ವಿದ್ಯಮಾನ ಇವತ್ತಿಗೆ ಹೊಸದೇನಲ್ಲ. ಹಿಂದೆಯೂ ಇತ್ತು, ಆದರೆ ಆಗ ಅಷ್ಟಾಗಿ ಬಯಲಿಗೆ ಬರುತ್ತಿರಲಿಲ್ಲವೇನೋ ಎಂಬುದು ನನ್ನ ಭಾವನೆ. ಅದಕ್ಕೆ ಕಾರಣಗಳು ಹತ್ತಾರು ಇರಬಹುದು.

ಸುಮಾರು ಎರಡೂವರೆ ದಶಕಗಳ ಹಿಂದಿನ ಮಾತು. ನಾನು ಸರ್ಕಾರಿ ದಂತವೈದ್ಯಕೀಯ ಕಾಲೇಜಿಗೆ ಸೇರಿದ್ದ ಆ ದಿನಗಳು. (ಅದನ್ನು ಪೂರ್ಣಗೊಳಿಸದೆ ಮುಂದೆ ನನ್ನ ದಾರಿ ನಾ ಹಿಡಿದೆ ಎಂಬುದು ನಂತರದ ಮಾತು). ಮೊದಲ ಎರಡು ವರ್ಷಗಳಲ್ಲಿ ಕೆಲವೊಂದು ಮೂಲಭೂತ ವೈದ್ಯಕೀಯ ವಿಷಯಗಳನ್ನೂ ಕಲಿಸಿಕೊಡಲಾಗುತ್ತದೆ. ಹೀಗೆ ನಾವು ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ (ಬಿಎಂಸಿ) ಮೂರ್ನಾಲ್ಕು ವಿಷಯಗಳನ್ನು ಮೊದಲ ವರ್ಷದಲ್ಲಿ ಕಲಿಯಬೇಕಿತ್ತು.

ಆಗ ಒಬ್ಬ ಪ್ರಾಧ್ಯಾಪಕ ತರಗತಿಯಲ್ಲಿ ಅದೆಷ್ಟು ಕೆಟ್ಟದಾಗಿ ಹೀಯಾಳಿಸಿ ಮಾತನಾಡುತ್ತಿದ್ದನೆಂದರೆ, ಆತನ ಮಾತುಗಳು ನನಗೆ ಎಂದೂ ಸಲ್ಲುತ್ತಿರಲಿಲ್ಲವಾದರೂ ಸಹ ನನ್ನಂತಹವರಿಗೆ ಬೇಸರ ತರುತ್ತಿದ್ದುದು ಮತ್ತು ಕೋಪ ಬರಿಸುತ್ತಿದ್ದುದು ನಿಜ. ನಾನು ಯಾರನ್ನೂ ಜಾತಿಯಿಂದ ಕಂಡಿಲ್ಲ, ಆದರೆ ಆತನ ವರ್ತನೆ ಮಾತ್ರ ನನಗೆ ಅವನ ಜಾತಿ ಹುಡುಕುವಂತೆ ಮಾಡಿತ್ತು. ಆತ ಬ್ರಾಹ್ಮಣರಲ್ಲೊಬ್ಬ ಮಹಾ ಬ್ರಾಹ್ಮಣ. ಅಷ್ಟೇ ಅಲ್ಲ, ಆನಂತರ ನನಗೆ ತಿಳಿದಿದ್ದು ಅವನೊಬ್ಬ ಮಹಾನ್ ಚಡ್ಡಿ ಎಂದೂ ಸಹ! ಯಾರಾದರೂ ವಿದ್ಯಾರ್ಥಿ ಅವನ ಪ್ರಶ್ನೆಗೆ ಉತ್ತರಿಸಲಿಲ್ಲವಾದರೆ, “ನಿನ್ನ ಹೆಸರೇನು? ಕೋಟಾದಲ್ಲಿ ಬಂದುಬಿಡ್ತಾರೆ, ಇಲ್ಲಿ ಏನೂ ಗೊತ್ತಿರೋದಿಲ್ಲ. ಪಿಯುಸಿಲಿ ಎಷ್ಟು ನಿನ್ನ ಪರ್ಸೆಂಟೇಜು?” ಎಂದು ಆತ ತರಗತಿಯಲ್ಲಿ ತೀರಾ ಕೆಟ್ಟ ದನಿಯಲ್ಲಿ ವ್ಯಂಗ್ಯವಾಗಿ ಛೇಡಿಸುತ್ತಿದ್ದ. ಏನೇನೋ ತನ್ನ ಕತೆ ಪುರಾಣಗಳನ್ನ ಬಡಬಡಿಸುತ್ತಿದ್ದ. ನಿಜಕ್ಕೂ ನನ್ನಂತಹವರಿಗೇ ಅವನ ನಡವಳಿಕೆ ಜಿಗುಪ್ಸೆ ಮೂಡಿಸುತ್ತಿತ್ತು. ಆದರೆ ನಾವು ಅಸಹಾಯಕರಾಗಿದ್ದೆವು. ಸಂಘಟನೆ ಏನೊಂದೂ ಇರಲಿಲ್ಲ. ಮೇಲಾಗಿ ವೃತ್ತಿ ಕೋರ್ಸ್ ನ (ಇಂಟರ್ನಲ್ಸ್, ಪ್ರಾಕ್ಟಿಕಲ್, ಹಾಳೂಮೂಳು) ಭಯ ಎಲ್ಲರಿಗೂ! ಸಂತ್ರಸ್ತರೂ ಸಹ ಒಂದೇ ಒಂದು ಸಲವೂ ಇದರ ವಿರುದ್ಧ ಸಂಘಟಿತರಾಗಿದ್ದನ್ನು ನಾ ಕಂಡಿಲ್ಲ. (ಅದಕ್ಕೆ ಕಾರಣಗಳೂ ಇಲ್ಲದಿಲ್ಲ).

ಈ ವ್ಯಕ್ತಿ ಎಷ್ಟು ಜಾತೀವಾದಿ ಎಂದರೆ, ನನಗೊಮ್ಮೆ ತೀವ್ರ ಅನಾರೋಗ್ಯದಿಂದಾಗಿ ಇಂಟರ್ನಲ್ ಪರೀಕ್ಷೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಆತ ನನ್ನ ಹೆಸರನ್ನು ಪೂರ್ಣವಾಗಿ ಓದಿಕೊಂಡು, ನನ್ನ ಜಾತಿ ತಿಳಿದುಕೊಂಡು ಪುನಃ ಪರೀಕ್ಷೆ ಕೊಟ್ಟಾಗ ತಾನೇ ಕುಳಿತಿದ್ದ. ಆಗ ನನಗೆ, “ನೀನೇನು ಹೆದರಬೇಡ, ನಮ್ಮವಳೇ ನೀನು…..” ಇತ್ಯಾದಿಗಳನ್ನು ಹೇಳಿ ಸಮಾಧಾನಪಡಿಸಿದ್ದಲ್ಲದೆ ನನ್ನ ತಾಯಿಗೂ ಅಭಯ ನೀಡಿದ್ದನಂತೆ! ಇಂತಹ ಜಾತಿ ಆಧಾರಿತ ನಡವಳಿಕೆಯನ್ನು ಪ್ರಾಧ್ಯಾಪಕರಿಂದ ಎಂದೂ ನಿರೀಕ್ಷಿಸದಿದ್ದ ನಾನು ಒಂದು ರೀತಿ ಬೆಚ್ಚಿಬಿದ್ದಿದ್ದೆ. ಮರು ಉತ್ತರಿಸುವ ಮನಸ್ಸು ಇದ್ದರೂ ಅಷ್ಟು ಧೈರ್ಯ ಆಗ ನನ್ನಲ್ಲಿರಲಿಲ್ಲವೋ ಏನೋ. ಮೌನವಾಗಿ ಮನದೊಳಗೇ ನೊಂದು ಹಿಂದಿರುಗಿದ್ದೆ. ಸಾಕಷ್ಟು ಪರಿತಪಿಸಿದ್ದೆ. ಕಾಲೇಜಿನೊಳಗೆ ಜಾತಿ ಹುಡುಕಿ ಕೇಳದಿದ್ದರೂ ಫೇವರ್ ಮಾಡುವುದನ್ನು ಕಂಡು ಗಾಬರಿಯಾಗಿದ್ದೆ. ಆ ಸಂದರ್ಭದಲ್ಲಿ ನಾನು ಯಾವ ಸಂಘಟನೆಯಲ್ಲೂ ತೊಡಗಿಕೊಂಡಿರಲಿಲ್ಲ.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೇಲ್ಮಟ್ಟದಲ್ಲಿ ಕುಳಿತವರ ಇಂತಹ ದುರ್ವರ್ತನೆಗಳು, ಜಾತಿವಾದಿ ಧೋರಣೆಗಳು ತಳ ಸಮುದಾಯಗಳ ವಿದ್ಯಾರ್ಥಿಗಳಿಗೆ ಅದೆಷ್ಟು ನೋವುಂಟು ಮಾಡಬೇಡ!? ಮಾನವೀಯತೆ ಕಲಿಸಬೇಕಾದ ವೈದ್ಯಕೀಯ ಕಾಲೇಜಿನಲ್ಲಿ ಜಾತಿ ತಾರತಮ್ಯದ ಪಾಠ ಹೇಳಿಕೊಟ್ಟು ಅಂತಹ ಕ್ರೂರ ವ್ಯವಸ್ಥೆಯನ್ನು ಪೋಷಿಸುವ ಮುಠ್ಠಾಳ ಪ್ರಾಧ್ಯಾಪಕರು! ರೋಹಿತ್ ವೇಮುಲ ಘಟನೆ ಇರಬಹುದು‌ ತದನಂತರದ ಇನ್ನಾವುದೇ ಪ್ರಕರಣವಿರಬಹುದು, ಅವುಗಳನ್ನು ಕಂಡಾಗೆಲ್ಲಾ ನನಗೆ ನನ್ನ ಅನುಭವ ನೆನಪಿಗೆ ಬಂದುಬಿಡುತ್ತದೆ.

ನನ್ನ ಜಾತಿಯ ಕಾರಣದಿಂದಾಗಿಯೇ ನನಗೆ ನೆರವಾಗಲು ಆ ಪ್ರಾಧ್ಯಾಪಕ ಮುಂದಾಗಿದ್ದ, ನನಗದು ಖಂಡಿತಾ ಬೇಡವಾಗಿತ್ತು. ಇದೇ ಜಾತಿಯ ಕಾರ್ಡನ್ನು ಬಳಸಿ ತನ್ನ ವೃತ್ತಿಜೀವನದಲ್ಲಿ ಇನ್ನೆಷ್ಟು ಬ್ರಾಹ್ಮಣೇತರರನ್ನು ಆತ ಬಲಿ ಮಾಡಿರಲಿಕ್ಕಿಲ್ಲ?! ಮಿದುಳೊಳಗೆಲ್ಲಾ ಜನಿವಾರ ಸುತ್ತಿಕೊಂಡವರು, ಅಥವಾ ಇಂತಹ ಜಾತೀವಾದಿಗಳು (ಅವರವರ ಜಾತಿಗೆ ಆದ್ಯತೆ ನೀಡುವವರು) ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಈಗ ಇನ್ನೆಷ್ಟು ಸಂಖ್ಯೆಯಲ್ಲಿ ಹೆಚ್ಚಿರಬಹುದು? ಊಹಿಸಿಕೊಳ್ಳಲೂ ಭಯವಾಗುತ್ತದೆ.

Related posts

ರಾಜಧಾನಿ, ಶತಾಬ್ದಿ ಎಕ್ಸ್‌ಪ್ರೆಸ್‌ಗಳನ್ನೂ ಹಿಮ್ಮೆಟ್ಟಿ ಸಮಯಪಾಲನೆಯಲ್ಲಿ ತನ್ನ ಬದ್ಧತೆ ಮುಂದುವರೆಸಿದ ವಂದೇ ಭಾರತ್‌ ಎಕ್ಸ್‌ಪ್ರೆಸ್‌

Kannada News